"ಜಯತು ಕೋದಂಡರಾಮ ಜಯತು ದಶರಥರಾಮ, ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು।।
ಶ್ರೀ ಕೋದಂಡರಾಮಸ್ವಾಮಿಯ ಭವ್ಯ ಮೂರ್ತಿ
ಪಂಚಮುಖಿ ಆಂಜನೇಯನ ದರ್ಶನ ಪಡೆದು ಮುಂದೆಸಾಗಿದಂತೆ ಆತನ ಆರಾಧ್ಯಮೂರ್ತಿ ಶ್ರೀ ಕೋದಂಡರಾಮಸ್ವಾಮಿಯ ಭವ್ಯ ಸನ್ನಿಧಿ ಎದುರಾಗುತ್ತದೆ. ಪಾಣಿಪೀಠ ಸಹಿತ 26 ಅಡಿ ಎತ್ತರದ ಹೊಯ್ಸಳ ವಾಸ್ತುಶಿಲ್ಪ ಆಧಾರಿತ ಕೃಷ್ಣಶಿಲೆಯಲ್ಲಿ ನಿರ್ಮಾಣಗೊಂಡ ವಿಶ್ವದಲ್ಲೇ ಅತೀ ಎತ್ತರದ ಶ್ರೀ ಕೋದಂಡರಾಮನ ಭವ್ಯಮೂರ್ತಿ ನಮ್ಮ ಕಣ್ಮನವನ್ನು ಸೆಳೆಯುತ್ತದೆ. ಈ ಕೋದಂಡರಾಮನ ಮೂರ್ತಿ ಏಕಕೃಷ್ಣಶಿಲೆಯಲ್ಲಿ ನಿರ್ಮಾಣಗೊಂಡ ವಿಶ್ವದ ಅತ್ಯಂತ ಎತ್ತರದ ಮೂರ್ತಿ ಎನಿಸಿಕೊಂಡಿದೆ. ಹೊಯ್ಸಳ ಭಂಗಿಯಲ್ಲಿ ನಿಂತ ಕೋದಂಡರಾಮನ ಮೂರ್ತಿಯನ್ನು ನೋಡುತ್ತಿದ್ದಂತೆ ಒಂದು ಧನ್ಯತಾ ಭಾವ ನಮ್ಮಲ್ಲಿ ಮೂಡುತ್ತದೆ. -ವಿಶೇಷ ಕೆತ್ತನೆಗಳಿಂದ ಕೂಡಿದ ಶಿಲ್ಪಿಯ ಅದ್ಭುತ ಕೈಚಳಕವನ್ನು ಮೂರ್ತಿಯಲ್ಲಿ ಕಾಣಬಹುದಾಗಿದೆ. ಒಂದು ಕೈಯಲ್ಲಿ ಬಿಲ್ಲು ಮತ್ತು ಬಾಣಗಳನ್ನು ಧರಿಸಿದ ಶ್ರೀ ರಾಮನ ಭವ್ಯಮೂರ್ತಿ ಇದಾಗಿದೆ.
ದಶಾವತಾರ ಪ್ರಭಾವಳಿ
ಕೋದಂಡರಾಮನ ಭವ್ಯ ಮೂರ್ತಿಯ ಹಿಂಭಾಗದಲ್ಲಿ ಬೃಹದಾಕಾರದ ಪ್ರಭಾವಳಿಯನ್ನು ಹಿತ್ತಾಳೆಯ ಹೊದಿಕೆಯೊಂದಿಗೆ ನಿರ್ಮಿಸಲಾಗಿದೆ. ಈ ಪ್ರಭಾವಳಿಯೂ ವಿಷ್ಣುವಿನ ದಶಾವತಾರದ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ.
ಅಭಿಷೇಕ ಗೋಪುರ
ಭವ್ಯ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಲು 35 ಅಡಿ ಎತ್ತರದ ಗೋಪುರವನ್ನು ನಿರ್ಮಿಸಲಾಗಿದೆ. ಭಕ್ತರು ಈ ಗೋಪುರದ ಮೇಲೆ ಏರಿ ಭಕ್ತಿ ಭಾವದೊಂದಿಗೆ ಶ್ರೀರಾಮನಿಗೆ ಪುಷ್ಪಾರ್ಚನೆಯನ್ನು ಮಾಡಬಹುದು.
ಬೃಹದಾಕಾರದ ರಾಮನ ಛತ್ರ
ಅಭಿಷೇಕ ಮಂಟಪದ ಮೇಲ್ಭಾಗದಲ್ಲಿ ಬೃಹದಾಕಾರದ ಛತ್ರವೊಂದನ್ನು ನಿರ್ಮಿಸಲಾಗಿದೆ ಇದನ್ನು ಶ್ವೇತ ಛತ್ರ ಎಂದು ಕರೆಯುತ್ತಾರೆ.
ಬಾಲ ಗಣಪತಿ ಸನ್ನಿಧಿ
ಶ್ರೀ ರಾಮನ ಬಲಭಾಗದಲ್ಲಿ ಬಾಲ ಗಣಪತಿಯ ಸನ್ನಿಧಿಯೂ ಇದೆ. ಸಂಕಷ್ಟಿ ಸೇರಿದಂತೆ ವಿಶೇಷ ದಿನಗಳಂದು ಇಲ್ಲಿ ಗಣಪನಿಗೆ ಪೂಜೆಗಳು ನಡೆಯುತ್ತವೆ.
ಭಕ್ತಾಂಜನೇಯ ವಿಗ್ರಹ
ಕೋದಂಡರಾಮನ ಬಳಿ ಭಕ್ತಾಂಜನೇಯ ತನ್ಮಯತೆಯಿಂದ ಕೂತು ಶ್ರೀರಾಮನನ್ನು ಆರಾಧಿಸುತ್ತಿದ್ದಾನೆ. ವಿಗ್ರಹದ ಬಳಿ 3.5 ಅಡಿ ಎತ್ತರದ ಭಕ್ತಾಂಜನೇಯನ ವಿಗ್ರಹವಿದೆ.
ನಾಗ ಸನ್ನಿಧಿ
ಶ್ರೀ ಕ್ಷೇತ್ರದಲ್ಲಿ ನಾಗದೇವರ ಸಾನಿಧ್ಯವಿದೆ. ನಾಗರ ಪಂಚಮಿ ಸೇರಿದಂತೆ ವಿಶೇಷ ದಿನಗಳಂದು ನಾಗದೇವರಿಗೆ ಪೂಜೆ, ಅಭಿಷೇಕಗಳು ನಡೆಯುತ್ತವೆ.
15 ಅಡಿ ಎತ್ತರದ ಶಿಲಾ ಕೆತ್ತನೆಯ ಆಂಜನೇಯನ ಗದೆ
ಶ್ರೀ ಕೋದಂಡರಾಮನ ಸನ್ನಿಧಿಯನ್ನು ಪ್ರವೇಶಿಸುತ್ತಿದ್ದಂತೆ 15 ಅಡಿ ಎತ್ತರದ ಕಲ್ಲಿನಿಂದ ನಿರ್ಮಿತವಾಗಿರುವ ಆಂಜನೇಯನ ಗದೆಯನ್ನು ನೋಡಬಹುದು. ಗದೆಯನ್ನು ನೋಡುತ್ತಿದ್ದಂತೆ ಎದುರಿನ ಗೋಡೆಯಲ್ಲಿ ಅಚ್ಚಾಗಿರುವ ಉಬ್ಬು ಶಿಲ್ಪಗಳು ನಮ್ಮನ್ನು ಸೆಳೆಯುತ್ತವೆ ಇದು ಹನುಮಗಿರಿಯ ಸಂಪೂರ್ಣ ಚರಿತ್ರೆಯನ್ನು ಹೇಳುತ್ತಿವೆ.