ಹನುಮಗಿರಿ
ಮುಖಪುಟ ಸ್ಥಳ ಪುರಾಣ ಸೇವೆಗಳು ಕಾರ್ಯಕ್ರಮಗಳು ದೇಣಿಗೆ ಸಂಪರ್ಕಿಸಿ

ಸ್ಥಳ ಪುರಾಣ

ರಾಮಾಯಣ ಯುದ್ಧದ ಸಂದರ್ಭ

ಭಕ್ತ ಜನರು ಭಕ್ತಿಯಿಂದ ಪೂಜಿಸುವ ಶ್ರೀ ಕ್ಷೇತ್ರ ಹನುಮಗಿರಿಗೆ ಪೌರಾಣಿಕ ಹಿನ್ನೆಲೆಗಳಿವೆ. ಸಾಕ್ಷಾತ್ ಹನುಮಂತನ ದಿವ್ಯ ಸಾನ್ನಿಧ್ಯವಿರುವ ಬಯಲು ಕ್ಷೇತ್ರದ ಈ ಪುಣ್ಯ ಭೂಮಿಯ ಪೌರಾಣಿಕ ಹಿನ್ನೆಲೆಯನ್ನು ಹುಡುಕುತ್ತಾ ಹೋದಂತೆ ನಾವು ರಾಮಾಯಣ ಕಾಲವನ್ನು ತಲುಪುತ್ತೇವೆ. ರಾಮಾಯಣ ಯುದ್ದದ ಸಂದರ್ಭ ರಾವಣನ ಮಗನಾದ ಇಂದ್ರಜಿತನು ಲಕ್ಷ್ಮಣನ ಮೇಲೆ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿದಾಗ ಲಕ್ಷ್ಮಣನು ಗಂಭೀರವಾಗಿ ಗಾಯಗೊಂಡು ಮೂರ್ಛೆಗೊಳಗಾಗುತ್ತಾನೆ. ಈ ಸಂದರ್ಭದಲ್ಲಿ ಹಿಮಾಲಯದಲ್ಲಿನ ದ್ರೋಣಗಿರಿ (ಮಹೋದಯ) ಪರ್ವತದಿಂದ ವಿಶೇಷ ಔಷಧಿ ಮೂಲಿಕೆಯನ್ನು ತರಲು ಹನುಮಂತನಿಗೆ ಹೇಳಲಾಗುತ್ತದೆ. ದ್ರೋಣಗಿರಿ ಪರ್ವತವನ್ನು ತಲುಪಿದಾಗ ಹನುಮಂತನು ಆ ಮೂಲಿಕೆಯನ್ನು ಗುರುತಿಸಲಾಗದೇ ಗಲಿಬಿಲಿಗೊಳ್ಳುತ್ತಾನೆ. ಇಡೀ ಪರ್ವತವನ್ನು ಎತ್ತಿಕೊಂಡು ಹೋಗುತ್ತೇನೆ ಎಂದು ಅಲ್ಲಿನ ಅರಸನಿಗೆ ಹೇಳುತ್ತಾನೆ. ಅದಕ್ಕೆ ಅರಸನು ಪರ್ವತವನ್ನು ಎತ್ತಿಕೊಂಡು ಹೋಗುವುದಕ್ಕೆ ಅಡ್ಡಿ ಇಲ್ಲ ಆದರೆ ಎತ್ತಿಕೊಂಡು ಹೋದ ಪರ್ವತವನ್ನು ಮತ್ತೆ ಅದೇ ರೀತಿಯಾಗಿ ತಂದು ಇಡಬೇಕು ಎಂದು ಷರತ್ತು ವಿಧಿಸುತ್ತಾನೆ. ಅರಸನಿಗೆ ವಾಗ್ದಾನ ನೀಡಿ ಇಡೀ ಪರ್ವತವನ್ನು ಎತ್ತಿಕೊಂಡು ಆಂಜನೇಯ ರಣರಂಗಕ್ಕೆ ತರುತ್ತಾನೆ. ಪರ್ವತ ಹೊತ್ತು ತಂದ ಸಂದರ್ಭದಲ್ಲಿ ಅದರ ಕೆಲವು ಭಾಗಗಳು ಸಹಜವಾಗಿ ಬಿದ್ದದ್ದು ಹನುಮಂತನಿಗೆ ಗೊತ್ತಾಗಲಿಲ್ಲ.

ದ್ರೋಣಗಿರಿ ಪರ್ವತ ಹೊತ್ತ ಆಂಜನೇಯ
ದ್ರೋಣಗಿರಿ ಪರ್ವತ ಹೊತ್ತ ಆಂಜನೇಯ

ಹನುಮಗಿರಿಯ ಉದ್ಭವ

ರಣರಂಗದಿಂದ ಮತ್ತೆ ಪರ್ವತವನ್ನು ಎತ್ತಿಕೊಂಡು ದ್ರೋಣಗಿರಿಗೆ ಹಿಂತಿರುಗಿದಾಗ ಪರ್ವತದ ಕೆಲವು ಭಾಗಗಳು ಇಲ್ಲದಿರುವುದು ತಿಳಿಯುತ್ತದೆ. ಹನುಮಂತನು ಕೊಟ್ಟ ಮಾತಿನಂತೆ ಕಳೆದ ಭಾಗಗಳನ್ನು ಅರಸಿಕೊಂಡು ದಕ್ಷಿಣ ಭಾಗಕ್ಕೆ ಬಂದಾದ ಅದರಲ್ಲಿ ಒಂದು ಪ್ರಮುಖ ಭಾಗ ವಸು ಮಹರ್ಷಿಯ ತಪೋಭೂಮಿಯಲ್ಲಿ ಬಿದ್ದಿರುತ್ತದೆ. ಆಂಜನೇಯ ಅದನ್ನು ಕಂಡು ವಸುಋಷಿಯ ತಪೋಭೂಮಿಯ ಬಳಿ ಬರುತ್ತಾನೆ. ಅಲ್ಲಿ ಪೀಡಿಸುತ್ತಿದ್ದ ಶಾಕಿನಿ ಡಾಕಿನಿಯರನ್ನು ನಿಗ್ರಹಿಸಿ ಋಷಿಯ ಅನುಗ್ರಹಕ್ಕೆ ಪಾತ್ರನಾಗಿ ಅವರ ಅಪೇಕ್ಷೆಯಂತೆ ಲೋಕಕಲ್ಯಾಣಾರ್ಥವಾಗಿ ಅಲ್ಲಿ ನೆಲೆಸುತ್ತಾನೆ. ಮುಂದೆ ಆ ಪ್ರದೇಶವೇ ಹನುಮಗಿರಿಯಾಗುತ್ತದೆ.

ಹನುಮಗಿರಿ ಪರಿಸರ
ಹನುಮಗಿರಿ ಪರಿಸರ

ಪಂಚಮುಖಿ ಆಂಜನೇಯ ರೂಪ

ಹನುಮಗಿರಿಯಲ್ಲಿ ನೆಲೆಸಿದ ಹನುಮಂತ ಕಾಲಕ್ರಮೇಣದಲ್ಲಿ ಶ್ರೀರಾಮನನ್ನು ಕಾಣಲು ಹಂಬಲಿಸಿ ಆತನನ್ನು ಹುಡುಕುತ್ತಾ ದಕ್ಷಣ ಭಾಗದಿಂದ ಪಾತಾಳ ಲೋಕ ಸೇರುತ್ತಾನೆ. ಅಲ್ಲಿ ಬಲಿಚಕ್ರವರ್ತಿ ಮತ್ತು ನರಸಿಂಹರಲ್ಲಿ ಯುದ್ಧ ಮಾಡಿ ಗೆಲ್ಲುತ್ತಾನೆ. ಪರಿಣಾಮವಾಗಿ ನರಸಿಂಹ ಶಕ್ತಿ ಆಂಜನೇಯನಲ್ಲಿ ಐಕ್ಯವಾಗುತ್ತದೆ. ಬಲಿಚಕ್ರವರ್ತಿ ಪ್ರತಿ ವರುಷ ದೀಪಾವಳಿಯ ಪುಣ್ಯದಿನದಂದು ಹನುಮಗಿರಿಗೆ ಬರುವೆನೆಂದು ಮಾತು ಕೊಡುತ್ತಾನೆ. ಆ ಪ್ರಕಾರ ಪ್ರತಿ ವರುಷ ದೀಪವಾಳಿಯ ದಿನ ಬಲಿಯೇಂದ್ರ ಪೂಜೆ ಶ್ರೀ ಕ್ಷೇತ್ರದಲ್ಲಿ ಜರಗುತ್ತದೆ. ಮುಂದೆ ರಾಮನನ್ನು ಹುಡುಕುತ್ತಾ ಆಂಜನೇಯನು ಉತ್ತರ ದಿಕ್ಕಿಗೆ ಹೋದಾಗ ಹಿಮಾಲಯದಲ್ಲಿ ಶ್ವೇತವರಾಹಸ್ವಾಮಿ ಎದುರಾಗುತ್ತಾನೆ. ಅವರೀರ್ವರಲ್ಲಿ ಮಾತು ಮಿತಿಮೀರಿ ಯುದ್ಧವಾಗುತ್ತದೆ. ಕೊನೆಗೆ ಶ್ವೇತವರಾಹಸ್ವಾಮಿ ಆಂಜನೇಯನಲ್ಲಿ ಸಖ್ಯ ಬೆಳೆಸಿ ಆತನಲ್ಲಿ ಐಕ್ಯವಾಗುತ್ತದೆ. ನಂತರ ವರಾಹಸ್ವಾಮಿಯ ಜೊತೆಗೂಡಿ ರಾಮನನ್ನು ಹುಡುಕಲು ಹೊರಟ ಆಂಜನೇಯನಿಗೆ ಹಯಗ್ರೀವ ಸ್ವಾಮಿಯ ದರ್ಶನವಾಗುತ್ತದೆ. ಮಾತುಮೀರಿ ಆಂಜನೇಯನೊಂದಿಗೆ ಹಯಗ್ರೀವ ಸ್ವಾಮಿಯೂ ಯುದ್ಧಕ್ಕೆ ಮುಂದಾಗುವಾಗ ಬ್ರಹ್ಮ ದೇವರು ಬಂದು ತಡೆದು ಹಯಗ್ರೀವ ಸ್ವಾಮೀಯು ಆಂಜನೇಯನಲ್ಲಿ ಐಕ್ಯವಾಗುವಂತೆ ಸೂಚಿಸಿ, ಶ್ರೀರಾಮ ದ್ವಾಪರ ಕಾಲದಲ್ಲಿ ಪಶ್ಚಿಮದ್ವಾರಕೆಯಲ್ಲಿ ಶ್ರೀಕೃಷ್ಣನಾಗಿ ಆಂಜನೇಯನಿಗೆ ಕಾಯುತ್ತಿರುತ್ತಾನೆ ಎಂದು ತಿಳಿಸುತ್ತಾನೆ. ಆ ಪ್ರಕಾರ ಆಂಜನೇಯ ಪಶ್ಚಿಮದ ದ್ವಾರಕೆಯನ್ನು ಸೇರುತ್ತಾನೆ. ಅಲ್ಲಿ ಶ್ರೀಕೃಷ್ಣ ಪರಮಾತ್ಮ ಗರುಡನನ್ನು ಆಂಜನೇಯನಲ್ಲಿಗೆ ಕಳುಹಿಸುತ್ತಾನೆ. ಅಲ್ಲಿ ಗರುಡನಿಗೂ ಆಂಜನೇಯನಿಗೂ ಯುದ್ಧವಾಗುತ್ತದೆ. ಹನುಮಂತನಿಂದ ಗರುಡ ಗರ್ವಭಂಗವಾಗುತ್ತದೆ. ಅಲ್ಲಿ ಆಂಜನೇಯನಿಗೆ ಶ್ರೀಕೃಷ್ಣನು ಶ್ರೀರಾಮನ ರೂಪದಲ್ಲಿ ದರ್ಶನ ನೀಡುತ್ತಾನೆ ಮತ್ತು ಗರುಡ ಶಕ್ತಿಯನ್ನು ಆಂಜನೇಯನಿಗೆ ಅನುಗ್ರಹಿಸುತ್ತಾನೆ. ಈ ಮೂಲಕ ಆಂಜನೇಯನ ಶ್ರೀರಾಮನ ಹುಡುಕಾಟದಲ್ಲಿ ನಾಲ್ಕು ದೇವರ ಶಕ್ತಿಯನ್ನು ಪಡೆದು ಪಂಚಮುಖಿ ಆಂಜನೇಯನಾಗುತ್ತಾನೆ. ಪಂಚಮುಖಿ ಆಂಜನೇಯವಾಗಿ ಶ್ರೀರಾಮನಿಗೆ ತನ್ನ ವಿಶ್ವರೂಪ ತೋರಿದ ಮಾರುತಿ ರಾಮನನ್ನು ತನ್ನೊಂದಿಗೆ ಹನುಮಗಿರಿಗೆ ಬರುವಂತೆ ಪ್ರಾರ್ಥಿಸಿ ಕರೆ ತರುತ್ತಾನೆ. ಶ್ರೀ ರಾಮ ಕೋದಂಡರಾಮ ರೂಪದಿಂದ ಹನುಮಗಿರಿಗೆ ಬಂದು ನೆಲೆಸುತ್ತಾನೆ. ಬಾಲಗಣಪತಿ, ಶೇಷನಾಗರೊಂದಿಗೆ ಹನುಮಗಿರಿಯಲ್ಲಿ ಪಂಚಮುಖಿ ಆಂಜನೇಯ ನೆಲೆಸಿ ಭಕ್ತರ ಕಷ್ಟ ನಿವಾರಿಸಿ, ಇಷ್ಟಾರ್ಥ ನೆರವೇರಿಸಿ ತನ್ನ ಮಹಿಮೆ ತೋರುತ್ತಾನೆ. ಸೀತಾಮಾತೆ ಪ್ರಕೃತಿಯ ರೂಪದಲ್ಲಿ ನೆಲೆಸಿ ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ. ಇತಿಹಾಸ ಸಾರುವಂತೆ ಮುಖ್ಯವಾಗಿ ಶ್ರೀ ಕ್ಷೇತ್ರವು ಶನಿದೋಷ ನಿವಾರಣೆಯ ಕಾರಣಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ.

ಹನುಮಗಿರಿಯ ದಿವ್ಯ ದರ್ಶನ
ಹನುಮಗಿರಿಯ ದಿವ್ಯ ದರ್ಶನ
ಕ್ಷೇತ್ರದ ವೈಭವ
ಕ್ಷೇತ್ರದ ವೈಭವ