ದೈವ ಭಕ್ತಿಯೊಂದಿಗೆ ದೇಶಭಕ್ತಿಯೂ ಅತ್ಯಗತ್ಯ ಎಂಬ ಉದ್ದೇಶವನ್ನಿಟ್ಟುಕೊಂಡು 2023ರಲ್ಲಿ ಅಮೃತಶಿಲೆಯ ಭಾರತ ಮಾತಾ ಮಂದಿರ ಹಾಗೂ ಅಮರ ಜ್ಯೋತಿ ಯೋಧ ಸ್ಮಾರಕವನ್ನೊಳಗೊಂಡ "ಅಮರಗಿರಿ"ಯನ್ನು ಧರ್ಮಶ್ರೀ ಪ್ರತಿಷ್ಠಾನದ ನೇತೃತ್ವದಲ್ಲಿ ನಿರ್ಮಿಸಲಾಯಿತು. ರಾಷ್ಟ್ರದ ಗೌರವಾನ್ವಿತ ಗೃಹ ಮಂತ್ರಿಗಳಾದ ಶ್ರೀ ಅಮಿತ್ ಷಾ ಅವರು ಅಮರಗಿರಿಯನ್ನು ಲೋಕಾರ್ಪಣೆಗೊಳಿಸಿದರು. ಇಂದು ದಕ್ಷಿಣ ಭಾರತದ ಎರಡನೇ ಭಾರತ ಮಾತಾ ಮಂದಿರ ಇರುವುದು ನಮ್ಮ ಹನುಮಗಿರಿಯಲ್ಲಿ ಎನ್ನುವುದು ನಮಗೆ ಹೆಮ್ಮೆಯ ವಿಚಾರ.
ಶ್ರೀ ಕ್ಷೇತ್ರ ಹನುಮಗಿರಿಯು ಅಮರಯೋಧ ಶ್ರೀ ಆಂಜನೇಯ ಸ್ವಾಮಿಯ ಶಕ್ತಿ, ಸಾನ್ನಿಧ್ಯಗಳ ಭವ್ಯಕ್ಷೇತ್ರ, ಇಲ್ಲಿರುವ 'ಅಮರಗಿರಿ'ಯು ಭಾರತಮಾತೆ, ಯೋಧರು ಹಾಗೂ ಅನ್ನದಾತರನ್ನು ನೆನಪಿಸುವ, ಗೌರವಿಸುವ ತಾಣ. ಆಂಜನೇಯ, ಕೋದಂಡರಾಮರು ನೆಲೆಯಾದ ಪುಣ್ಯ ಕ್ಷೇತ್ರ 'ಹನುಮಗಿರಿ, ರಾಮಗಿರಿ'ಯ ದರ್ಶನದ ಬಳಿಕ 'ಅಮರಗಿರಿ'ಯ ವೀಕ್ಷಣೆಯು ಮುದ ನೀಡುತ್ತದೆ. ಮೊದಲಿಗೆ ಶ್ರೀ ಭಾರತೀ ಅಮರ ಜ್ಯೋತಿ ಮಂದಿರದ ವೀಕ್ಷಣೆ. ಬಳಿಕ ಭಾರತಾಂಬೆಯನ್ನು ಕೊಂಡಾಡುವ 'ವಂದೇ ಮಾತರಂ' ಶಿಲಾ ಫಲಕ ದರ್ಶನ.
ಮುಂದೆ ವಿಸ್ಮಯ ತಂತ್ರಜ್ಞಾನದ ಅಷ್ಟಭುಜಾಕಾರದ ಆಲಯವು ಮನ ಸೆಳೆಯುತ್ತದೆ. ಗಿರಿಯನ್ನು ಇಳಿಯುತ್ತಾ ಬರುತ್ತಿದ್ದಂತೆ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದ ಯೋಧರ ಹಸ್ತ ಆಕಾರದ ಶಿಲ್ಪ. ಇದು ಅಮರ ಯೋಧರ ವಿಜಯದ ಸಂಕೇತ. ಮುಂದೆ ಸಿಗುವುದು 'ವೀರಕಂಭ.' ಭಾರತದ ಮೂರು ಮಾನಗಳಾದ ಭೂ ವಾಯು ಮತ್ತು ಜಲ ಸೇನೆಗಳ ಲಾಂಛನಗಳನ್ನು ಹೊತ್ತ ಸ್ಥಂಭ. ಶಿಲೆಯಲ್ಲಿ ಅಮರಜ್ಯೋತಿ ಮತ್ತು ಗಡಿಯಲ್ಲಿ ಕಾವಲು ಕಾಯುತ್ತಿರುವ ವೀರ ಸೈನಿಕರ ಶಿಲ್ಪಾಕೃತಿಗಳು ಭವ್ಯ ಭಾರತದ ರಕ್ಷಣಾ ವ್ಯವಸ್ಥೆಯನ್ನು ನೆನಪಿಸುತ್ತದೆ.
ಇವೆಲ್ಲವನ್ನೂ ವೀಕ್ಷಿಸುತ್ತಾ ಅಷ್ಟಭುಜಾಕೃತಿಯ ಆಲಯವನ್ನು ಒಳಹೊಕ್ಕಾಗ ಶ್ವೇತವರ್ಣದ ಅಮೃತಶಿಲೆಯ 'ಭಾರತ ಮಾತೆ'ಯ ಆರಡಿ ಎತ್ತರದ ವಿಗ್ರಹ, ಹಿಂದೆ ಅಖಂಡ ಭಾರತದ ಚಿತ್ತಾರದಲ್ಲಿ ಆಂಜನೇಯ ಮತ್ತು ಪಾರ್ವತೀ ಪರಮೇಶ್ವರರ ನೆಲೆ. ಭಾರತಮಾತೆಯ ಎಡ, ಬಲಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ (ಜೈ ಜವಾನ್, ಜೈ ಕಿಸಾನ್) ಪ್ರತಿಮೆಗಳು. 'ದೇಶಕ್ಕೆ ಅನ್ನ ನೀಡುವ ರೈತ ಮತ್ತು ಗಡಿಗಳಲ್ಲಿ ಕಾವಲು ಕಾಯುವ ಯೋಧ' – ಇವರೀರ್ವರು ದೇಶದ ಉಸಿರೆಂಬ ಸಂಕೇತ.
ಭಾರತಾಂಬೆಯ ಎದುರಿಗೆ 'ಅಮರ ಜವಾನ್' ಸ್ಮಾರಕ ಶಿಲೆ. ನೇಪಥ್ಯದಲ್ಲಿ ಸೂರ್ಯೋದಯದ ಕಲ್ಪನೆಯ ರಚನೆಗಳು. ನಮ್ಮೆಲ್ಲರ ಬದುಕಿನ ಸೂರ್ಯೋದಯಕ್ಕೆ ಕಾರಣರಾದ ಯೋಧರ ಸಾಹಸ, ಸಾಧನೆ. ಬಲಿದಾನಗಳನ್ನು ಮತ್ತೆ ಮತ್ತೆ ನೆನಪಿಸುವ, ಗೌರವಿಸುವ ಉಪಾಧಿಯಿದು.
ಅಮರಗಿರಿಯ ಆವರಣದಲ್ಲಿ ಯುದ್ಧಭೂಮಿಯ ವರ್ಲಿ ಚಿತ್ತಾರಗಳು. ಒಂದೊಂದು ಚಿತ್ರಗಳಲ್ಲಿ ದೇಶ, ಸೈನ್ಯದ ಕುರಿತಾದ ಕುರುಹುಗಳು, ಭಾರತಾಂಬೆಯು ಆರಾಧ್ಯ ದೇವತೆ, ಭಕ್ತಿ-ನಂಬುಗೆಗಳೇ ಪೂಜೆ. ರಾಷ್ಟ್ರಭಕ್ತಿಯು ಅನುಷ್ಠಾನವೇ ಪುಷ್ಪಾರ್ಚನೆ.. ಹೀಗೆ ಉದಾತ್ತ ಕಲ್ಪನೆ.
ದೇವತಾರಾಧನೆ, ರಾಷ್ಟ್ರಾರಾಧನೆ, ಕಲಾರಾಧನೆ, ನಿಸರ್ಗಾರಾಧನೆಗಳ ಮೂಲಕ ಭವ್ಯ ಭಾರತವನ್ನು ಕಟ್ಟುವ ಪ್ರಕ್ರಿಯೆಗಳಿಗೆ 'ಅಮರಗಿರಿ' ಆರಂಭದ ತಾಣವಾಗಿದೆ. 'ಬದುಕು ಸಮಾಜಕ್ಕಾಗಿ - ಪ್ರಾಣ ದೇಶಕ್ಕಾಗಿ' ಎನ್ನುವ ಸಂದೇಶಗಳು ಮನದೊಳಗೆ ಇಳಿಯುತ್ತವೆ. ಒಳಹೊಕ್ಕು ಹೊರ ಬರುವಾಗ 'ದೇಶಪೂಜನ'ದ ಅನುಭಾವ.