ಹನುಮಗಿರಿ
ಮುಖಪುಟ ಸ್ಥಳ ಪುರಾಣ ಸೇವೆಗಳು ಕಾರ್ಯಕ್ರಮಗಳು ದೇಣಿಗೆ ಸಂಪರ್ಕಿಸಿ

ಶ್ರೀ ಕ್ಷೇತ್ರದ ಹಿನ್ನಲೆ

ಸನಾತನ ಸಂಸ್ಕೃತಿಯ ತವರೂರಾದ ಕರಾವಳಿಯ ಪ್ರಶಾಂತ ವಾತಾವರಣ, ಸಹ್ಯಾದ್ರಿ ಬೆಟ್ಟಗಳ ಹಸಿರ ಸಾಲು, ಮಲೆನಾಡಿನ ನಿಸರ್ಗರಮಣೀಯ ದೃಶ್ಯಕಾವ್ಯ, ಹಚ್ಚಹಸುರಿನ ಗಿರಿವನಗಳ ಮಧ್ಯೆ ಪ್ರಶಾಂತಮಯ ಪರಿಸರದಲ್ಲಿ ನೆಲೆಸಿರುವ ರಾಮಹನುಮರ ಪುಣ್ಯಕ್ಷೇತ್ರವೇ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ.

ಪೌರಾಣಿಕ ಹಿನ್ನೆಲೆ

ಪೌರಾಣಿಕ ಕಥೆಗಳ ಪ್ರಕಾರ ರಾಮಾಯಣದ ಯುದ್ದದ ಸಂದರ್ಭದಲ್ಲಿ ರಾವಣನ ಮಗನಾದ ಇಂದ್ರಜಿತನು ಲಕ್ಷ್ಮಣನ ಮೇಲೆ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿದಾಗ ಲಕ್ಷ್ಮಣನು ಮೂರ್ಛೆಗೊಳಗುತ್ತಾನೆ. ಈ ಸಂದರ್ಭದಲ್ಲಿ ಹಿಮಾಲಯದಲ್ಲಿನ ದ್ರೋಣಗಿರಿ ಪರ್ವತದಿಂದ ಸಂಜೀವಿನಿ, ವಿಶಲ್ಯಕರಣಿ ಮುಂತಾದ ವಿಶೇಷ ಔಷಧ ಮೂಲಿಕೆಗಳನ್ನು ತರಲು ಹನುಮಂತನಿಗೆ ಹೇಳಲಾಗುತ್ತದೆ. ದ್ರೋಣಗಿರಿ ಪರ್ವತವನ್ನು ತಲುಪಿದಾಗ ಹನುಮಂತನು ಆ ಮೂಲಿಕೆಯನ್ನು ಗುರುತಿಸಲಾಗದೆ ಇಡೀ ಪರ್ವತವನ್ನೇ ಎತ್ತಿಕೊಂಡು ಬರುತ್ತಾನೆ. ಈ ಪರ್ವತವನ್ನು ಎತ್ತಿ ತಂದಾಗ ಅದರ ಕೆಲ ಭಾಗಗಳು ಕೆಲವು ಪ್ರದೇಶಗಳಲ್ಲಿ ಬೀಳುತ್ತದೆ. ರಣರಂಗದಿಂದ ಮತ್ತೆ ಪರ್ವತವನ್ನು ಎತ್ತಿಕೊಂಡು ಹಿಮಾಲಯಕ್ಕೆ ಹಿಂತಿರುಗಿದಾಗ ಪರ್ವತದ ಕೆಲ ಭಾಗಗಳು ಇಲ್ಲದಿರುವುದು ಹನುಮಂತನಿಗೆ ತಿಳಿಯುತ್ತದೆ. ಅದನ್ನು ಹುಡುಕಿಕೊಂಡು ಹನುಮಂತನು ವಸು ಮಹರ್ಷಿಯ ತಪೋಭೂಮಿಗೆ ಬರುತ್ತಾನೆ. ವಸು ಮಹರ್ಷಿಯ ಅಪೇಕ್ಷೆಯಂತೆ ರಾಕ್ಷಸನಿಗ್ರಹ ಮಾಡಿ ಲೋಕಕಲ್ಯಾಣಾರ್ಥವಾಗಿ ಇಲ್ಲಿ ನೆಲೆಸುತ್ತಾನೆ. ಮುಂದೆ ಹನುಮ ನೆಲೆಸಿದ ಈ ಪುಣ್ಯಭೂಮಿಯೇ ಹನುಮಗಿರಿಯಾಗುತ್ತದೆ.

ಕ್ಷೇತ್ರದ ಅಭಿವೃದ್ಧಿ

ಮುಂದೆ ಧರ್ಮಶ್ರೀ ಪ್ರತಿಷ್ಠಾನದ ನೇತೃತ್ವದಲ್ಲಿ ದೈವಜ್ಞರ ಚಿಂತನೆಯೊಂದಿಗೆ 2011ನೇ ಇಸವಿಯಲ್ಲಿ ನರಸಿಂಹ, ಗರುಡ, ವರಾಹ, ಹಯಗ್ರೀವ, ಮತ್ತು ಆಂಜನೇಯನ ಐಕ್ಯಭಾವದೊಂದಿಗೆ ಹನ್ನೊಂದು ಅಡಿ ಎತ್ತರದ ಏಕಕೃಷ್ಣಶಿಲಾ ಶ್ರೀ ಪಂಚಮುಖಿ ಆಂಜನೇಯ ವಿಗ್ರಹವನ್ನು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಯಿತು. ಜಗತ್ತಿನ ಶ್ರೇಷ್ಠ ಕಾವ್ಯ ರಾಮಾಯಣವನ್ನು ಪ್ರತಿ ವ್ಯಕ್ತಿಗೂ ಸರಳ ರೂಪದಲ್ಲಿ ತಿಳಿಯಪಡಿಸಬೇಕೆಂದು ಶಿಲಾ ರೂಪದ ಕೆತ್ತನೆಗಳೊಂದಿಗೆ ರಾಮಾಯಣ ಥೀಂ ಪಾರ್ಕ್ ಅನ್ನು ಇದೇ ಸಂದರ್ಭದಲ್ಲಿ ನಿರ್ಮಿಸಲಾಯಿತು. ವಿವಿಧ ಜಾತಿಯ ನೆಲಮೂಲ ಸತ್ವವನ್ನೊಳಗೊಂಡ ಫಲ – ಪುಷ್ಪಗಳ ಸಂಜೀವಿನಿ ವನ, ಭಾರತೀಯ ದೇಸಿ ತಳಿಗಳನ್ನು ಒಳಗೊಂಡ ಕಪಿಲಾಶ್ರಮ ಗೋಶಾಲೆ, ಸಾರ್ವಜನಿಕರಿಗೆ ಕಾರ್ಯಕ್ರಮಗಳನ್ನು ನೆರವೇರಿಸಲು ಸಹಕಾರವಾಗುವಂತೆ ವೈದೇಹಿ ಸಭಾಭವನ ಆರಂಭಿಸಲಾಯಿತು. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಹನುಮಗಿರಿಯ ಶ್ರೀ ಪಂಚಮುಖಿ ಆಂಜನೇಯ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ ಬರುತ್ತಿದ್ದಂತೆ ಭಕ್ತರ ಸಂಖ್ಯೆ ಸಾಗರೋಪಾದಿಯಲ್ಲಿ ಕ್ಷೇತ್ರದತ್ತ ಬರತೊಡಗಿತು.

ರಾಮ ಮತ್ತು ಅಮರಗಿರಿ

ಎಲ್ಲಿ ಹನುಮನಿರುವನೋ, ಅಲ್ಲಿ ರಾಮನಿರಬೇಕು. ರಾಮಾ ಹನುಮರದ್ದು ಅವಿನಾಭಾವ ಸಂಬಂಧ. ಶ್ರೀ ಪಂಚಮುಖಿ ಆಂಜನೇಯನ ಮನಸೋಭೀಷ್ಟದಂತೆ ದೈವಜ್ಞರ ಸೂಚನೆಯೊಂದಿಗೆ 2017ರಲ್ಲಿ ಪಾಣಿಪೀಠ ಸಹಿತ 26 ಅಡಿ ಎತ್ತರದ ಹೊಯ್ಸಳ ಭಂಗಿಯಲ್ಲಿರುವ ವಿಶ್ವದಲ್ಲೇ ಅತಿ ಎತ್ತರವಾದ ಏಕಕೃಷ್ಣಶಿಲಾ ಶ್ರೀ ಕೋದಂಡರಾಮನ ವಿಗ್ರಹವನ್ನು ಬಾಲಗಣಪತಿ, ಭಕ್ತಾಂಜನೇಯ ಹಾಗೂ ನಾಗ ಸಾನಿಧ್ಯದೊಂದಿಗೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಪ್ರತಿಷ್ಠಾಪಿಸಲಾಯಿತು. ದೈವ ಭಕ್ತಿಯೊಂದಿಗೆ ದೇಶಭಕ್ತಿಯೂ ಅತ್ಯಗತ್ಯ ಎಂಬ ಉದ್ದೇಶವನ್ನಿಟ್ಟುಕೊಂಡು 2023ರಲ್ಲಿ ಅಮೃತಶಿಲೆಯ ಭಾರತ ಮಾತಾ ಮಂದಿರ ಹಾಗೂ ಅಮರ ಜ್ಯೋತಿ ಯೋಧ ಸ್ಮಾರಕವನ್ನೊಳಗೊಂಡ "ಅಮರಗಿರಿ"ಯನ್ನು ಧರ್ಮಶ್ರೀ ಪ್ರತಿಷ್ಠಾನದ ನೇತೃತ್ವದಲ್ಲಿ ನಿರ್ಮಿಸಲಾಯಿತು. ರಾಷ್ಟ್ರದ ಗೌರವಾನ್ವಿತ ಗೃಹ ಮಂತ್ರಿಗಳಾದ ಶ್ರೀ ಅಮಿತ್ ಷಾ ಅವರು ಅಮರಗಿರಿಯನ್ನು ಲೋಕಾರ್ಪಣೆಗೊಳಿಸಿದರು. ಇಂದು ದಕ್ಷಿಣ ಭಾರತದ ಎರಡನೇ ಭಾರತ ಮಾತಾ ಮಂದಿರ ಇರುವುದು ನಮ್ಮ ಹನುಮಗಿರಿಯಲ್ಲಿ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ರಾಮ ಹನುಮರ ಅನುಗ್ರಹದೊಂದಿಗೆ ಶ್ರೀ ಕ್ಷೇತ್ರದ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಸಾಂಸ್ಕೃತಿಕ ಸೇವೆಗಳು ನಿರಂತರವಾಗಿ ನಡೆಯುತ್ತಾ ಬರುತ್ತಿವೆ.

ಇಂದಿನ ಮಹತ್ವ

ಇಂದು ಹನುಮಗಿರಿಯಲ್ಲಿ ಕೋದಂಡರಾಮನಿದ್ದಾನೆ, ಹನುಮನಿದ್ದಾನೆ. ಭಾರತಮಾತೆಯಿದ್ದಾಳೆ. ಭಕ್ತಾಂಜನೇಯ, ಬಾಲ ಗಣಪತಿ, ನಾಗಸಾನಿಧ್ಯ, ಯೋಧಸ್ಮಾರಕವಿದೆ. ಸುಂದರವಾದ ಪ್ರಕೃತಿ ರೂಪದಲ್ಲಿ ಸೀತಾಮಾತೆ ನೆಲೆಸಿದ್ದಾಳೆ. ಶನಿದೋಷ ನಿವಾರಣೆ ಸೇರಿದಂತೆ ನಿತ್ಯ ನಿರಂತರವಾಗಿ ಹಲವಾರು ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತಾ ಬರುತ್ತಿವೆ. ರಾಜ ಮಹಾರಾಜರಿಂದ ಹಿಡಿದು ಶ್ರೀಸಾಮಾನ್ಯರ ತನಕ ಲಕ್ಷಾಂತರ ಭಕ್ತರು ಪ್ರತಿನಿತ್ಯ ಕ್ಷೇತ್ರಕ್ಕೆ ಆಗಮಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.